ಪೆಸ್ಟಲಾಟ್ಸಿ, ಯೋಹಾನ್ ಹೈನ್ರಿಕ್
	1746-1827. ಆಧುನಿಕ ಪ್ರಾಯೋಗಿಕ ಶಿಕ್ಷಣಶಾಸ್ತ್ರಕ್ಕೆ ಪಿತಾಮಹನೆಂದು ಪರಿಗಣಿಸಲಾಗಿರುವ ಸ್ವಿಟ್‍ಜûರ್‍ಲೆಂಡಿನ ಶಿಕ್ಷಣವೇತ್ತ. 1746ರ ಜನವರಿ 12ರಂದು ಜೂರಿಕ್‍ನಲ್ಲಿ ಜನಿಸಿದ. ನಿರ್ಗತಿಕ ಬಡ ಹಾಗೂ ತಬ್ಬಲಿ ಮಕ್ಕಳ ಕಲ್ಯಾಣಕ್ಕಾಗಿ ಇಡೀ ಜೀವನವನ್ನೆ ಸವೆಸಿದ. ತನ್ನ ವಿದ್ಯಾರ್ಥಿ ಜೀವನದಲ್ಲಿ ಬಡಜನರ ಉದ್ದಾರಕ್ಕಾಗಿ ಸಮಾಜ ಸುಧಾರಣೆಯ ಕಾರ್ಯವನ್ನು ಕೈಕೊಂಡು ಶೋಷಿತ ಬಡಕುಟುಂಬಗಳ ಪರವಾಗಿ ಪ್ರಚಾರ ಮಾಡುತ್ತಿದ್ದುದಲ್ಲದೆ ಅವರಿಗೆ ಕಾರ್ಯತಃ ನೆರವು ನೀಡುತ್ತಿದ್ದ. ಜೂóರಿಕ್‍ನಲ್ಲಿ ಒಂದು ನಿರಾಶ್ರಿತ ಶಾಲೆಯನ್ನು ತೆರೆದು ನಿರ್ಗತಿಕ ಮಕ್ಕಳಿಗೆ ವ್ಯವಸಾಯ, ಕೈಕೆಲಸ ಮುಂತಾದವುಗಳಲ್ಲಿ ಶಿಕ್ಷಣವಿತ್ತು ಅವರು ಜೀವನೋಪಾಯದ ಕಸುಬೊಂದನ್ನು ಅನುಸರಿಸಲು ಸಹಾಯ ಮಾಡುತ್ತಿದ್ದ. ಪ್ರಾಯೋಗಿಕವಾಗಿ ಆರಂಭಿಸಿದ ಈ ಧರ್ಮಾರ್ಥ ಶಿಕ್ಷಣ ಅಷ್ಟೇನೂ ಯಶಸ್ವಿಯಾಗಲಿಲ್ಲ. ನಿರಾಶೆಯಿಂದ ತುಂಬ ಚಿಂತೆಗೀಡಾಗಿ ತನ್ನ ಮುಂದಿನ ಜೀವನದ ಕರ್ತವ್ಯದ ಬಗ್ಗೆ ತೀವ್ರವಾಗಿ ಆಲೋಚಿಸತೊಡಗಿದ. ಆಗ ತೋರಿದ ಕೆಲವಂಶಗಳನ್ನು ಸಂಗ್ರಹಿಸಿ ದಿ ಈವಿನಿಂಗ್ ಅವರ್ ಆಫ್ ಎ ಹಮಿ ಟ್ ಎಂಬ ಸಿದ್ಧಾಂತ ಗ್ರಂಥವನ್ನುರಚಿಸಿದ. ಅನಂತರ 1805ರಲ್ಲಿ ಲಿಯೊನಾರ್ಡ್ ಆಂಡ್ ಗರ್ಟೊರ್ಡ್ ಎಂಬ ಐದು ಸಂಪುಟಗಳ ಕಾದಂಬರಿಯನ್ನು ಪ್ರಕಟಿಸಿದ. ಇವೆರಡು ಕೃತಿಗಳ ಮೂಲಕ ಸಾಮಾಜಿಕ ನೈತಿಕ ಹಾಗೂ ರಾಜಕೀಯ ಸುಧಾರಣೆಗಳ ಬಗ್ಗೆ ತನ್ನ ಅಭಿಪ್ರಾಯಗಳನ್ನು ಹೊರಗೆಡಹಿದ. 1808ರ ನೆಪೋಲಿಯನ್ ದಾಳಿಯಲ್ಲಿ ಪಾಳೊಡೆದು ಹೋಗಿದ್ದ ಸ್ಟಾನ್ಸ್ ನಗರದ ನಿರ್ಗತಿಕ ಮಕ್ಕಳನ್ನೆಲ್ಲ ಕೂಡಿ ಹಾಕಿ ಅವರಿಗೆರಕ್ಷಣೆಗಳನ್ನು ಕೊಡುವ ಕಾರ್ಯದಲ್ಲಿ ಆಸಕ್ತಿ ವಹಿಸಿದ.

ಪೆಸ್ಟಲಾಟ್ಸಿ 1808ರಲ್ಲಿ ಯ್ವೆರ್ಡನ್ ನಗರದಲ್ಲಿ ಒಂದು ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದ. ಅದು ವಸತಿ ವಿದ್ಯಾಲಯವಾಗಿದ್ದು ಸುಮಾರು ಎರಡು ದಶಕಗಳ ಕಾಲ ಅಸ್ತಿತ್ವದಲ್ಲಿತ್ತು. ಅಲ್ಲಿ ತನ್ನ ಹಿಂದಿನ ಭಾವನೆಗಳಿಗೆ ಶಾಸ್ತ್ರೀಯರೂಪಕೊಡುವ ಯತ್ನ ನಡೆಸಿದ. ಅಂದಿನ ಶಿಕ್ಷಣದಲ್ಲಿ ಕಂಡುಬರುತ್ತಿದ್ದ ಕೆಲವು ನ್ಯೂನತೆಗಳನ್ನು ತಿದ್ದುವ ಯತ್ನದಲ್ಲಿ ಕೆಲವು ತೀರ ನೂತನವೆನ್ನಬಹುದಾದ ಬೋಧನಾ ವಿಧಾನಗಳನ್ನು ಅನುಷ್ಠಾನಕ್ಕೆ ತಂದ. ಮಕ್ಕಳು ನೈಜವಸ್ತುಗಳ ಪರಿವೀಕ್ಷಣ, ಇಂದ್ರಿಯಗ್ರಹಣ (ಸಂವೇದನೆ), ಭಾವನೆ ಮತ್ತು ಆಲೋಚನೆಗಳ ಮೂಲಕ ಶಿಕ್ಷಣ ಪಡೆಯಬೇಕೆಂದು ವಾದಿಸಿ ಅದಕ್ಕಾಗಿ ವಸ್ತುಪಾಠ ಎಂಬ ಹೆಸರಿನ ನೂತನ ಪಾಠಕ್ರಮವನ್ನು ಆರಂಭಿಸಿದ. ಅಂದಿನ ಯೂರೋಪಿನ ಶಿಕ್ಷಣ ಕ್ಷೇತ್ರದಲ್ಲಿ ಅದು ನೂತನ ಬೆಳವಣಿಗೆಯೆನಿಸಿತು. ಯೂರೋಪಿನ ಬೇರೆ ಬೇರೆ ದೇಶಗಳಿಂದ ವಿದ್ಯಾರ್ಥಿಗಳು ಈ ಶಾಲೆಗೆ ಬಂದು ಸೇರಿದರು. ಪ್ರಪಂಚದ ಖ್ಯಾತ ವ್ಯಕ್ತಿಗಳನೇಕರು ಬಂದು ಈ ಪ್ರಯೋಗ ಶಾಲೆಯನ್ನು ನೋಡಿದರು. ವಿದ್ಯಾರ್ಥಿಗಳು ಕಲಿವಿನಲ್ಲಿ ನೇರವಾಗಿ ಪಾತ್ರವಹಿಸಬೇಕೆಂಬ ತತ್ತ್ವವನ್ನು ಮುಂದಿಟ್ಟುಕೊಂಡು 'ಮಾಡಿ ಕಲಿಯುವ ತತ್ತ್ವವನ್ನೂ ಅಲ್ಲಿ ಆಚರಣೆಗೆ ತರಲಾಯಿತು. ಪದಾರ್ಥಗಳನ್ನು ಪರಿವೀಕ್ಷಿಸುವುದರ ಜೊತೆಗೆ ಅವುಗಳ ಚಿತ್ರ ಅಥವಾ ನಕ್ಷೆ ಬರೆಯುವುದು, ಬರವಣಿಗೆ, ಸಂಗೀತ, ಪದಾರ್ಥಸಂಗ್ರಹ, ಪ್ರತಿಮೆಗಳ (ಮಾದರಿ) ನಿರ್ಮಾಣ, ಸಾಮೂಹಿಕ ಪಠನ ಮುಂತಾದ ಕಾರ್ಯಕ್ರಮಗಳನ್ನು ಅಳವಡಿಸಲಾಗಿತ್ತು. ಕೆಲಕಾಲದಲ್ಲಿ ಪ್ರತಿ ವರ್ಷದ ಪ್ರತಿತರಗತಿಯ ಮಕ್ಕಳ ಮಾನಸಿಕ ಶಕ್ತಿ ಸಾಮಥ್ರ್ಯಗಳನ್ನು, ಆಸಕ್ತಿ ಅಭಿರುಚಿಗಳನ್ನು ಅನುಸರಿಸಿ ಬೇರೆ ಬೇರೆ ಅಂತಸ್ತಿಗೊಪ್ಪುವಂತೆ ಆ ಕಾರ್ಯಕ್ರಮಗಳನ್ನು ಸ್ಥಿರೀಕರಿಸಲಾಯಿತು. ಅಂದಿನ ಶಿಕ್ಷಣ ಪ್ರಪಂಚಕ್ಕೆ ಪಠ್ಯಕ್ರಮರಚನೆಯಲ್ಲಿ ಇದು ನೂತನ ಪ್ರಯೋಗವೆನಿಸಿತು. ಯೂರೋಪಿನ ಶಿಕ್ಷಣವೇತ್ತರು ತೋರಿದ ಆಸಕ್ತಿ ಅಭಿನಂದನೆಗಳಿಂದ ಪ್ರೋತ್ಸಾಹಿತನಾಗಿ ಅಂಥ ನೂತನ ಶಾಲೆಗಳಲ್ಲಿ ಬೋಧಿಸಲು ಅಧ್ಯಾಪಕರ ತರಬೇತು ವಿಭಾಗವೊಂದನ್ನು ಪೆಸ್ಟಲಾಟ್ಸ ಅಲ್ಲಿ ಆರಂಭಿಸಿದ. ಈ ತರಬೇತು ಶಾಲೆಯಲ್ಲಿ ಸ್ವಲ್ಪಕಾಲ ಪ್ರೋಬೆಲ್ ಶಿಕ್ಷಣ ಪಡೆಯುತ್ತಿದ್ದ.

ಪೆಸ್ಟಲಾಟ್ಸಿಯ ಪ್ರಗತಿಪರ ಪ್ರಯೋಗವನ್ನು ಅನೇಕ ದೇಶಗಳು ಆಚರಣೆಗೆ ತರಲು ಯತ್ನಿಸಿದವು. ಯೂರೋಪಿನ ದೇಶಗಳಲ್ಲೂ ಅಮೆರಿಕದಲ್ಲೂ ಅನೇಕ ಪೆಸ್ಟಲಾಟ್ಸಿ ಶಾಲೆಗಳು ಆರಂಭವಾದವು. ಮುಂದೆ ಪ್ರಸಿದ್ದ ಶಿಕ್ಷಣವೇತ್ತರೆನಿಸಿ ನೂತನ ಪದ್ಧತಿಗಳನ್ನು ಆರಂಭಿಸಿದ ಪ್ರೋಬೆಲ್ ಮತ್ತು ಹರ್ಬರ್ಟರಿಗೆ ಇಲ್ಲಿನ ಪ್ರಯೋಗಗಳು ಮೂಲ ಆಧಾರವಾದವು. ಪ್ರಸಿದ್ಧ ಭೂಗೋಳಶಾಸ್ತ್ರಜ್ಞನೆನಿಸಿದ್ದ ರಿಟ್ಟರ್ ಭೂಗೋಳದ ನೂತನ ಪಾಠಕ್ರಮವನ್ನು ಇಲ್ಲಿ ತಾನು ಕಂಡು ಅನುಭವದ ಆಧಾರದ ಮೇಲೆರೂಢಿಸಿಕೊಂಡ. ಇಲ್ಲಿ ಬೋಧಿಸುತ್ತಿದ್ದ ವಸ್ತುಪಾಠದ ವಿಧಾನವನ್ನು ಇಂಗ್ಲೆಂಡಿನಲ್ಲಿ ಚಾರಲ್ಸ್ ಮತ್ತು ಎಲಿಜûಬೆತ್ ಮೇಯೋ ಎಂಬುವರು ಪ್ರಚಾರಕ್ಕೆ ತಂದರು. ಅಮೆರಿಕದಲ್ಲಿ ಅದು 1861ರಲ್ಲಿ ಆಸ್ಟೆಗೋ ಪದ್ಧತಿಯೆಂಬ ಹೆಸರಿನಲ್ಲಿ ಪ್ರಚಾರಕ್ಕೆ ಬಂತು. ನ್ಯೂಯಾರ್ಕಿನ ನಾರ್ಮಲ್ ಸ್ಕೂಲಿನಲ್ಲಿ ಆರಂಭವಾದ ಈ ಪದ್ಧತಿ ಕ್ರಮಕ್ರಮವಾಗಿ ಆ ದೇಶದ ಇತರ ಅಧ್ಯಾಪಕರ ಪ್ರಶಿಕ್ಷಣ ಶಾಲೆಗಳಿಗೂ ಹರಡಿತು.
ಪೆಸ್ಟಲಾಟ್ಸಿಯ ಪ್ರಭಾವ ಶಿಕ್ಷಣದ ಮೇಲೆ ತೀವ್ರ ಪರಿಣಾಮ ಬೀರಿತು. ಅಂದಿನ ಪ್ರಸಿದ್ಧ ತತ್ತ್ವಜ್ಞಾನಿ ಫಿಕೆಟ ಜರ್ಮನಿಯ ಪುನರುದ್ಧಾರಕ್ಕೆ ಪೆಸ್ಟಲಾಟ್ಸಿಯ ಶಿಕ್ಷಣ ಪದ್ಧತಿಯನ್ನು ಸರಿಯಾಗಿ ಅನುಷ್ಠಾನಕ್ಕೆ ತರುವುದೊಂದೇ ಮಾರ್ಗ ಎಂದಿದ್ದಾನೆ.

ಪೆಸ್ಟಲಾಟ್ಸಿ ಆರಂಭಿಸಿದ ವಸ್ತು ಪಾಠ ಆಧುನಿಕ ಬೋಧನ ವಿಧಾನಕ್ಕೆ ಅಂಕುರಾರ್ಪಣವೆಸಗಿತ್ತು. ಆದ್ದರಿಂದಲೇ ಅವನನ್ನು ಆಧುನಿಕ ಬೋಧನ ಕ್ರಮದ ಪಿತಾಮಹನೆಂದೂ ಪರಿಗಣಿಸಿರುವುದು. ಅವನು ಈ ನೂತನ ಕ್ರಮ ಶಾಲೆಯ ಕಾರ್ಯಕ್ರಮದಲ್ಲಿ ವಸ್ತು ಪಾಠವನ್ನೂ ಅನಂತರ ಪ್ರಕೃತಿ ಪಾಠವನ್ನೂ ಕೊನೆಗೆ ಸಾಮಾನ್ಯ ವಿಜ್ಞಾನವನ್ನೂ ಸೇರಿಸಲು ಅವಕಾಶ ಮಾಡಿಕೊಟ್ಟಿತು.
(ಎಸ್.ಎಸ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ